ಶ್ರವಣಬೆಳಗೊಳದ ಎರಡು ಬೆಟ್ಟಗಳಲ್ಲಿ ಒಂದು. ಇದನ್ನು ಚಿಕ್ಕ ಬೆಟ್ಟವೆಂದೂ ಕರೆಯುತ್ತಾರೆ. ಮತ್ತೊಂದು ಬೆಟ್ಟ ಇಂದ್ರಗಿರಿ (ನೋಡಿ). ಚಂದ್ರಗಿರಿ ಶಿಖರದ ಎತ್ತರ ಸಮುದ್ರಮಟ್ಟದಿಂದ 930 ಮೀ. ಈ ಬೆಟ್ಟದ ಮೇಲೆ 13 ಬಸದಿಗಳಿವೆ. ಎಲ್ಲವೂ ದ್ರಾವಿಡ ಶೈಲಿಯಲ್ಲಿ ಕಟ್ಟಿದವು. ಇದರಲ್ಲಿ ಕೆಲವು 8ನೆಯ ಶತಮಾನದಷ್ಟು ಪುರಾತನವಾದವು. ಶಾಂತಿನಾಥ ಬಸದಿ, ಪಾಶರ್ವ್ನಾಥ ಬಸದಿ, ಚಂದ್ರಗುಪ್ತ ಬಸದಿ, ಚಂದ್ರಪ್ರಭ ಬಸದಿ, ಚಾವುಂಡರಾಯ ಬಸದಿ-ಇವು ಇಲ್ಲಿರುವ ಬಸದಿಗಳಲ್ಲಿ ಕೆಲವು. ಕೂಗೆ ಬ್ರಹ್ಮದೇವರ ಕಂಬ, ಮಹಾನವಮಿ ಮಂಟಪ, ಭರತೇಶ್ವರ ವಿಗ್ರಹ, ಇರುವೆ ಬ್ರಹ್ಮದೇವರ ಗುಡಿ, ಕಂಚಿನ ದೊಣೆ, ಲಕ್ಕಿದೊಣೆಭದ್ರಬಾಹು, ಗುಹೆ, ಚಾವುಂಡರಾಯನ ಬಂಡೆ-ಇವೂ ಪ್ರೇಕ್ಷಣೀಯ.

ಉತ್ತರಭಾರತದಲ್ಲಿ ಕ್ಷಾಮ ಸಂಭವಿಸಿದಾಗ ಭದ್ರಬಾಹುಮುನಿಯ ನೇತೃತ್ವದಲ್ಲಿ ಜೈನಸಂಘ ದಕ್ಷಿಣಕ್ಕೆ ವಲಸೆ ಬಂದು ಶ್ರವಣಬೆಳಗೊಳದಲ್ಲಿ ಬೀಡುಬಿಟ್ಟ ವಿಷಯವನ್ನೊಳಗೊಂಡ ಪ್ರಸಿದ್ಧ ಶಾಸನ ಇರುವುದು ಚಂದ್ರಗಿರಿಯ ಬೆಟ್ಟದ ಮೇಲೆಯೇ. ಚಂದ್ರಗುಪ್ತ ಮೌರ್ಯ ತನ್ನ ಕೊನೆಗಾಲವನ್ನು ಇಲ್ಲಿಯೇ ಕಳೆದನೆಂದು ನಂಬಲಾಗಿದೆ. ಈ ಬೆಟ್ಟದ ಬಂಡೆಗಳ ಮೇಲಣ ಶಾಸನಗಳು ಕನ್ನಡ ಲಿಪಿ, ಭಾಷೆ, ಸಾಹಿತ್ಯ ಕುರಿತ ವಿಚಾರಗಳ ಮೇಲೆ ವಿಶೇಷವಾದ ಬೆಳಕು ಬೀರುತ್ತವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ